Sunday, December 20, 2015

ಹೆಸರು ಮತ್ತು ವ್ಯಕ್ತಿತ್ವ

ಮೊನ್ನೆ ಭಾನುವಾರ ನಾನು ಎಂಜಿನಿಯರಿಂಗ್ ಓದುವಾಗ ಇದ್ದ ವಿದ್ಯಾರ್ಥಿ ನಿಲಯಕ್ಕೆ ಹೋಗಿದ್ದೆ. ಆ ದಿನ ನಿಲಯದ  ವಾರ್ಷಿಕೋತ್ಸವವನ್ನು ಏರ್ಪಡಿಸಲಾಗಿತ್ತು. ಈ ಬಾರಿ ನಿಲಯದ ಧರ್ಮದರ್ಶಿಗಳು ಮತ್ತು ಮುಖ್ಯ ಅತಿಥಿಗಳೊಟ್ಟಿಗೆ ವೇದಿಕೆಯ ಮೇಲೆ ಆಸಿನನಾಗಿದ್ದೆ.  ನಮ್ಮ ನಿಲಯದ ಹಿರಿಯ ವಿದ್ಯಾರ್ಥಿ ಬಳಗವನ್ನು ಪ್ರತಿನಿಧಿಸುವ ಜವಬ್ದಾರಿ ನನ್ನ ಮೇಲಿತ್ತು. ಈ ನಿಲಯವನ್ನು ಬಿಟ್ಟು ಎಂಟು ವರ್ಷಗಳಾಗಿವೆ. ಅಲೋಚನೆಗಳ ಮಹಾಪೂರವೇ ತಲೆಯನ್ನು ತುಂಬಿಹೋಗಿವೆ. ಎಂಟು ವರ್ಷಗಳ ಹಿಂದೆ ನಾನು ಇದೇ ವಾರ್ಷಿಕೋತ್ಸವವನ್ನು ವಿದ್ಯಾರ್ಥಿಯಾಗಿ ಮುನ್ನಡೆಸುತ್ತಿದ್ದೆ.

ಆಗ ನಡೆದ ಜಗಳಗಳು, ಸಂಭ್ರಮಗಳು, ಅಪಘಾತ, ದೇಣಿಗೆ ಸಂಗ್ರಹ ಹಾಗು ಮತ್ತಿತರ ವಿಷಯಗಳು ನನ್ನ ನೆನಪಿಗೆ ಬರತೋಡಗಿದವು. ಇಂತಹ ಆಚರಣೆಗಳು ನನ್ನಲ್ಲಿ ನಾಯಕತ್ವ ಗುಣ, ಸಂವಹನ ಕಲೆ, ಜನಬಳಕೆಯಂತಹ ಅತ್ಯುತ್ತಮ ಕೌಶಲ್ಯಗಳನ್ನು ಬೆಳೆಸಿದವು. ಈ ಆಚರಣೆಗಳು ನನ್ನನ್ನು ಮಧ್ಯ ರಾತ್ರಿಯವರೆಗೆ ದುಡಿಸಿದವು. ಒಂದಷ್ಟು ಸಮಾನ ಮನಸ್ಕ ಸ್ನೇಹಿತರನ್ನು ನನಗೆ ಕೊಟ್ಟವು.  ಹಾಸ್ಟೇಲ್ ಮತ್ತು ಕಾಲೇಜುಗಳಲ್ಲಿ ಒಂದಷ್ಟು ಕೀರ್ತಿಯನ್ನೂ ತಂದು ಕೊಟ್ಟವು. ಇವುಗಳಿಂದಲೇ ಸಾಕಷ್ಟು ಜೀವನ ಪಾಠಗಳನ್ನು ಕಲಿತೆ.

ಕೆಲವು ಘಟನೆಗಳು ನೆನಪಿನಲ್ಲಿ ಆಚ್ಚಳಿಯದಂತೆ ಉಳಿಯುತ್ತವೆ. ಪದೇ ಪದೇ ಕಾಡುತ್ತವೆ. ನಾನು ವೇದಿಕೆ ಮೇಲಿರುವಾಗ ಒಂದು ಘಟನೆ ನೆನಪಾಯಿತು. ಅದನ್ನು ನಿಮ್ಮೊಟ್ಟಿಗೆ ಹಂಚಿಕೊಳ್ಳುತ್ತಿದ್ದೇನೆ.

ಅಂದು ಕಾರ್ಯಕ್ರಮ ಹತ್ತು ಮೂವತ್ತಕ್ಕೆ ಶುರುವಾಗಬೇಕಿತ್ತು. ಉದ್ಘಾಟನಾ ಕಾರ್ಯಕ್ರಮಕ್ಕೆ ಇಬ್ಬರು ಮುಖ್ಯ ಅತಿಥಿಗಳನ್ನು ಆಹ್ವಾನಿಸಲಾಗಿತ್ತು. ಸರಿ ಸುಮಾರು ಹತ್ತು ಮೂವತ್ತಾಗಿತ್ತು. ಒಬ್ಬರು ಮುಖ್ಯ ಅತಿಥಿಗಳು ಇನ್ನೂ ಬಂದಿರಲಿಲ್ಲ. ಎಲ್ಲಾ ರ್ಮದರ್ಶಿಗಳು ಮತ್ತು ಒಬ್ಬರು ಮುಖ್ಯ ಅತಿಥಿಗಳು ಅಧ್ಯಕ್ಷರ ಕೊಠಡಿಯಲ್ಲಿದ್ದರು. ನಾನು ಅಧ್ಯಕ್ಷರ ಕೊಠಡಿಯಲ್ಲಿದ್ದು ಸಭಾಂಗಣದಲ್ಲಿದ್ದ ಸ್ನೇಹಿತರ ಜೊತೆ ಇಲ್ಲಿನ ಸ್ಥಿತಿಗತಿಗಳ ಬಗ್ಗೆ ವಿವರಿಸುತ್ತಿದ್ದೆ. ಇದರ ಮಧ್ಯದಲ್ಲೇ ನನ್ನ ಸ್ವಾಗತ ಭಾಷಣದ ತಯಾರಿಯನ್ನೂ ನಡೆಸುತ್ತಿದ್ದೆ. ಆಗ ನಮ್ಮ ಸಂಸ್ಥೆಯ ಅಧ್ಯಕ್ಷರು ಎಲ್ಲಪ್ಪ ಇನ್ನೊಬ್ಬರು ಅತಿಥಿಗಳು ಇನ್ನೂ ಬಂದಿಲ್ಲ ಅವರಿಗೊಂದು ಫೋನ್ ಮಾಡಿ ಎಲ್ಲಿದ್ದಾರೆ ವಿಚಾರಿಸು ಎಂದರು. ಅವರ ಮಾತಿನಂತೆ ಅವರ ಮುಂದಿದ್ದ ಹಳೇ ಕಾಲದ ಫೋನು ಕೈಗೆತ್ತಿಕೊಂಡು ಅತಿಥಿಗಳ ನಂಬರನ್ನು ಒತ್ತಿದೆ. ಸರ್ ನಮಸ್ಕಾರ, ತೋಟದಪ್ಪ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿ ಮಾತನಾಡುತ್ತಿರುವುದು, ಎಲ್ಲಿದ್ದೀರ ಎಂದೆ? ಅವರು , ಇಲ್ಲೇ ಹತ್ತಿರದಲ್ಲೇ ಇದ್ದೇನೆ, ಇನ್ನೇನು ಬಂದೆ ಎಂದರು. ಫೋನ್ ಕೆಳಗಿಟ್ಟು, ವರದಿಯನ್ನು ಅಧ್ಯಕ್ಷರಿಗೆ ಒಪ್ಪಿಸಿದೆ. ಇನ್ನೊಬ್ಬರು ಮುಖ್ಯ ಅತಿಥಿಗಳು ಸರಿಯಾದ ಸಮಯಕ್ಕೆ ಬಂದರು. ನಾನು ಸಭಾಂಗಣದಲ್ಲಿದ್ದ ವಿದ್ಯಾರ್ಥಿಗಳಿಗೆ ಮೇಸೆಜ್ ಕಳಿಸಿ, ಸ್ವಾಗತ ಸಮಿತಿಯವರು ದಯವಿಟ್ಟು ಬನ್ನಿ ಎಂದೆ.

ಸಭಾಂಗಣ ಕೆಲವೇ ಕೆಲವು ಅಡಿಗಳ ದೂರದಲ್ಲಿತ್ತು. ನಾನು ಅತಿಥಿಗಳನ್ನು ಮತ್ತು ಧರ್ಮದರ್ಶಿಗಳನ್ನು ನಮ್ಮ ಸ್ವಾಗತ ಸಮಿತಿಯೊಟ್ಟಿಗೆ ಪೂರ್ಣ ಕುಂಭದೊಟ್ಟಿಗೆ ಬರಬೇಕೆಂದು ಕೋರಿದೆ.  ಮುಂದೆ ಅತಿಥಿಗಳು, ನಂತರ ಧರ್ಮದರ್ಶಿಗಳು ಕೊನೆಯಲ್ಲಿ ಅಧ್ಯಕ್ಷರು ಸಭಾಂಗಣದ ಕಡೆಗೆ ಸಾಗಿದೆವು. ನಾನು ಅಧ್ಯಕ್ಷರೊಟ್ಟಿಗಿದ್ದೆ. ಅತಿಥಿಗಳು ಮತ್ತು ಧರ್ಮದರ್ಶಿಗಳು ಮುಂದೆ ಸಾಗಿದೊಡನೆ ಅಧ್ಯಕ್ಷರು ನನ್ನ ಬಲ ಕೈಹಿಡಿದು ಅವರ ಬಳಿ ಎಳೆದು ಒಂದು ಪ್ರಶ್ನೆ ಕೇಳಿದರು. ನಿನಗೆ ಹೆಸರಿದೇಯೆ? ನಾನು ಕಕ್ಕಾಬಿಕ್ಕಿಯಾದೆ. ಅವರೊಟ್ಟಿಗೆ ಸಾಕಷ್ಟು ಬಾರಿ ಮಾತನಾಡಿದ್ದೆ. ಹೌದು ಸರ್ ಹೆಸರಿದೆ ಎಂದೆ. ಇನ್ನೂ ಎಷ್ಟು ದಿನ ನೀನು ಇಂತವರ ಮಗ, ಇಂತಹ ಊರಿನವನು, ಇಂತಹ ಕಾಲೇಜಿನವನು ಎಂದು ಹೇಳಿಕೊಂಡಿರ್ತೀಯ? ನಿನ್ನ ಹೆಸರಿನಿಂದ ಯಾವಾಗಿನಿಂದ ಗುರ್ತಿಸಿಕೊಳ್ಳುತ್ತೀಯ, ನಿನ್ನದೇ ವ್ಯಕ್ತಿತ್ವವನ್ನು ಸೃಷ್ಟಿಸಿಕೊಳ್ಳುವುದಾದರು ಯಾವಾಗ ಎಂದು ಹೇಳಿ ಧರ್ಮದರ್ಶಿಗಳ ಗುಂಪನ್ನು ಸೇರಿಕೊಂಡರು. ಸುಮ್ಮನೆ ತಲೆ ಬಗ್ಗಿಸಿದೆ. ತಲೆ ಗಿರ್ರನೆ ಸುತ್ತುತ್ತಿತ್ತು.

ಸಾಕಷ್ಟು ಬಾರಿ ನಮ್ಮ ಸಂಸ್ಥೆಯ ಅಧ್ಯಕ್ಷರ ಬಳಿ ಮಾತಾಡಿದ್ದೇನೆ. ನನ್ನ ಹಲವಾರು ತಪ್ಪುಗಳನ್ನು ತಿದ್ದಿದ್ದಾರೆ. ಹಲವಾರು ಬಾರಿ ಬೆನ್ನು ತಟ್ಟಿದ್ದಾರೆ. ಈ ಘಟನೆ ನನ್ನನ್ನು ಬಹಳ ಕಾಡಿತು. ನಮ್ಮ ಹೆಸರನ್ನು ಹೆಮ್ಮೆಯಿಂದ ಹೇಳುವುದು ಎಷ್ಟು ಮುಖ್ಯ. ನಮ್ಮ ವ್ಯಕ್ತಿತ್ವವನ್ನು ಅದು ಸೂಚಿಸುತ್ತದೆ. ಅಂದಿನಿಂದ ನನ್ನ ಹೆಸರನ್ನು ಹೇಳುವ ಸಂದರ್ಭ ಬಂದಾಗಲೆಲ್ಲ ಬಹಳ ಹೆಮ್ಮೆಯಿಂದ ನನ್ನ ಹೆಸರನ್ನು ಹೇಳುತ್ತೇನೆ. ಹೊಸಬರನ್ನು  ಭೇಟಿ ಮಾಡಿದಾಗ ಸಾಕಷ್ಟು ಖುಷಿಯಿಂದ ನನ್ನ ಹೆಸರು ಹೇಳಿ ಪರಿಚಯ ಬೆಳಿಸಿಕೊಳ್ಳುತ್ತೇನೆ.

ಸಾಕಷ್ಟು ಜನರನ್ನು ಗಮನಿಸಿದ್ದೇನೆ. ಅವರು ತಮ್ಮನ್ನು ಪರಿಚಯಿಸಿಕೊಳ್ಳುವ ಅಭ್ಯಾಸವನ್ನೇ ಮೈಗೂಡಿಸಿಕೊಂಡಿರುವುದಿಲ್ಲ. ಸಾಕಷ್ಟು ಬಾರಿ ನಮ್ಮನ್ನು ನಾವೇ  ಸರಿಯಾಗಿ ಗುರುತಿಸಿಕೊಳ್ಳುವುದಿಲ್ಲ. ನಮ್ಮ ಹೆಸರು ಕಿವಿಯ ಮೇಲೆ ಬಿದ್ದರೆ ಕಿವಿಗಳು ನಿಮಿರುತ್ತವೆ ಅಲ್ಲವೇ? ನಮ್ಮ ಹೆಸರನ್ನು ಕರೆದಾಗ ಸಾಕಷ್ಟು ಬಾರಿ ಖುಷಿಯೇ ಆಗುತ್ತದೆ(ಕೋರ್ಟು ಅಥವಾ ಜೈಲುಗಳನ್ನು ಬಿಟ್ಟು ). ಮುಂದಿನ ಬಾರಿ ನಿಮ್ಮ ಹೆಸರನ್ನು ಹೆಮ್ಮೆಯಿಂದ ಹೇಳಿ, ನಿಮ್ಮ ಹೆಸರನ್ನು ಹೇಳುವಾಗ ನಾಚಿಕೆ ಪಡುವ ಯಾವ ಅಗತ್ಯವೂ ಇಲ್ಲ, ಅದು ನಿಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತದೆ. ನಿಮಗೆ ನಿಮ್ಮ ಹೆಸರಿನ ಬಗ್ಗೆ ಹೆಮ್ಮೆಯಿರಲಿ. ನಮ್ಮ ಹೆಸರಿನ ಬಗ್ಗೆ ನಮಗೇ ಹೆಮ್ಮೆಯಿರದಿದ್ದರೆ ಮತ್ಯಾರಿಗಿರುತ್ತದೆ. 

No comments:

Post a Comment