Wednesday, June 29, 2016

ಸೋಲುವುದರಲ್ಲಿ ತಪ್ಪಿಲ್ಲ.

ಪ್ರತಿದಿನ ಆಫೀಸಿನಲ್ಲಿ ಊಟವಾದ ನಂತರ ಒಂದು ಸುತ್ತು ಸುತ್ತಾಡಿ ಮತ್ತೆ ನಮ್ಮ ಕೆಲಸದ ಜಾಗಕ್ಕೆ ಹೋಗಿ ಕೂರುವ ಪರಿಪಾಠವಿದೆ. ನಮ್ಮ ಹೊಟ್ಟೆಗಳಲ್ಲಿ ತುಂಬಿ ತುಳುಕುತ್ತಿರುವ ಬೊಜ್ಜನ್ನು ನಿಯಂತ್ರಣದಲ್ಲಿಡಲಷ್ಟೇ ಈ ಪರಿಪಾಠ. ನಡೆಯುತ್ತಲ್ಲೇ ಪ್ರಪಂಚದ ಸಂಗತಿಗಳಿಂದ ಹಿಡಿದು ಮನೆಯೊಳಗೆ ಸೇರಿಕೊಂಡ ಜಿರಲೆಗಳ ಕುರಿತಂತೆ ನಮ್ಮ ವಿಚಾರಧಾರೆಗಳು ಹರಿಯುತ್ತವೆ. ಹೀಗೆ ಮೊನ್ನೆ ಮಾತನಾಡುತ್ತಾ ನನ್ನ ಸಹೋದ್ಯೋಗಿ ಸ್ವರ್ಣಾರ ಬಳಿ, ನನಗೇನೋ ಈ ಕೆಲಸ ಕಳೆದುಕೊಂಡರೆ ಅನ್ನುವ ಭಯವಿದೆ ಅಂದೆ. ಸ್ವರ್ಣ, ತಮಾಷೆ ಮಾಡಬೇಡ ಸುಮ್ಮನೇ ನಡೆ ಅಂದ್ರು. ಇಲ್ಲ ಸ್ವರ್ಣ ನನಗೆ ಕೆಲವೊಮ್ಮೆ ಹಾಗನಿಸುತ್ತೆ ಅಂದೆ. ಅವರಿಗೆ ಮಾತಿನ ಗಾಂಭಿರ್ಯ ಅರ್ಥವಾಗಿ. ನನಗೂ ಆ ಭಯವಿದೆ ಅಂದರು ಸ್ವರ್ಣ. ನಮ್ಮ ಸುತ್ತಲಿರುವ ಬಹುತೇಕರಿಗೆ ಆ ಭಯವಿದ್ದೇ ಇದೆ. ಇದು ಸಹಜ ಕೂಡ. ನಂತರ ಮತ್ತಷ್ಟು ಸಹೋದ್ಯೋಗಿ ಮಿತ್ರರ ಜೊತೆ ಇದೇ ವಿಷಯದ ಬಗ್ಗೆ ಚರ್ಚಿಸಿದೆ. ಬಹುತೇಕರಲ್ಲಿ ಈ ಭಯವಿದೆ ಎಂಬುದು ಅರಿವಾಯಿತು.

ಮೇಲಿನ ಚರ್ಚೆ ನಡೆದ ಒಂದಷ್ಟು ದಿನಗಳಾದ ಮೇಲೆ ನಮ್ಮ ಮನೆಯ ಒನರ್ ನನ್ನ ಭೇಟಿ ಮಾಡಲು ನಮ್ಮ ಮನೆಗೆ ಬಂದಿದ್ದರು. ನಾವು ಇರುವುದು ಮೊದಲನೆ ಮಹಡಿಯಲ್ಲಿ ಅವರಿರುವುದು ನೆಲಮಹಡಿಯಲ್ಲಿ. ಹೆಂಡತಿ ಮತ್ತು ಮಗು ಊರಿಗೆ ಹೋದ ಕಾರಣ ಸ್ವಲ್ಪ ಸಮಯ ಕಳೆಯಲು ಕಾರಣ ಹುಡುಕಿಕೊಂಡು ಮಾತನಾಡಲು ಬರುತ್ತಿರುತ್ತಾರೆ. ನಾನಿನ್ನು ಆಗ ತಾನೆ ಆಫ್ಹಿಸಿನಿಂದ ಮನೆಗೆ ಬಂದಿದ್ದೆ. ಸ್ವಲ್ಪ ಮುಖ ತೊಳೆದುಕೊಂಡು ಬರ್ತೀನಿ ಎಂದೆ. ಅವರು ನನ್ನ ರೋಮಿನಲ್ಲಿದ್ದ ಪುಸ್ತಕಗಳ ಮೇಲೆ ಕಣ್ಣಾಡಿಸುತ್ತಿದ್ದರು. ಮಾತಿಗೆ ಕೂತ ತಕ್ಷಣ ಇಷ್ಟೊಂದು ಪುಸ್ತಕಗಳನ್ನ ಓದಿದ್ದೀರಾ? ಅವರ ಮೊದಲ ಪ್ರಶ್ನೆ. ಎರಡನೆಯದು ಇವೆಲ್ಲ ನಿಮ್ಮ ಕೆಲಸಕ್ಕೆ ಸಂಬಂಧ ಪಟ್ಟ ಪುಸ್ತಕಗಳಾ?...ನಾನು ಸಹಜವಾಗಿಯೇ ಇಲ್ಲ ಇಲ್ಲ ಸುಮ್ಮನೇ ಕಾಲ ಕಳೆಯಲು ಓದುವಂತಹ ಪುಸ್ತಕಗಳಿವು, ನೀವೂ ಓದಿ ಯಾವುದಾದರು ಒಂದು ಎಂದೆ.  ಅವರು ಪುಸ್ತಕ ಓದುವುದು ದಡ್ಡತನದಂತೆಯೇ ಎನ್ನುವಂತೆ ಅಯ್ಯೋ ಬೇಡ ಬೇಡ ನನಗೆ ಅಂದ್ರು. ಹೆಚ್ಚು ಮಾತನಾಡಲೆಂದೇ ತಯರಾಗಿ ಬಂದವರಂತಿದ್ದರು. ನಮ್ಮ ಚಿಕ್ಕಮ್ಮ ಕೊಟ್ಟ ಬಿಸಿ ಬಿಸಿ ಕಾಫಿ ಹಿರುತ್ತಾ ಮಾತು ಮುಂದುವರಿಸಿದರು. ಪುಸ್ತಕಗಳನ್ನು ಕಂಡರೆ ನನಗೆ ಭಯ ಮಾರಾಯ. ಓದಲಾಗದೆ ಬೆಂಗಳೂರಿಗೆ ಬಂದೆ. ಆಗ ಹತ್ತನೇ ತರಗತಿ ಓದಿ, ಎರಡು ವರ್ಷದ ಇಂಡಷ್ಟ್ರಿಯಲ್ ಟ್ರೈನಿಂಗ್(ಐಟಿಐ) ಮಾಡಿ, ಮತ್ತೆ ಮುಂದೆ ಓದಲಾಗದೆ, ಮನೆಯಲ್ಲಿ ಹೇಳದೆ ಬೆಂಗಳೂರಿಗೆ ಓಡಿ ಬಂದೆ ಅಂದರು. ಅಲೇಲೆ ಸ್ವಲ್ಪ ಇನ್ಟ್‌ರೆಸ್ಟಿಂಗ್ ಆಗಿ ಇದಿಯಾಲ್ಲ ಮತ್ತಷ್ಟು ಉತ್ಸಾಹದಿಂದ ಕೆಳ ತೊಡಗಿದೆ.

ಹದಿನೆಂಟನೇ ವಯಸ್ಸಿಗೆ ಇವರು ಏನೂ ಗೊತ್ತಿಲ್ಲದ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದವರು. ಬಾ ಬೆಂಗಳೂರಿಗೆ ಸಹಾಯ ಮಾಡುತ್ತೇವೆ ಎಂದು ಹೇಳಿದ ನೆಂಟರೆಲ್ಲಾ ಕುಂಟು ನೆಪ ಹೇಳಿ ತಪ್ಪಿಸಿಕೊಂಡರು. ಬಹಳ ದಿನಗಳ ಬಳಿಕ ಪಾತ್ರೆ ಮಾರುವ ಕಂಪನಿಯಲ್ಲಿ ಕೆಲಸ ಗಿಟ್ಟಿಸಿದರು. ಈ ಕಂಪನಿ ಮುಂಬೈನಿಂದ ಪಾತ್ರೆಗಳನ್ನು ಕೊಂಡು ಕರ್ನಾಟಕದಲ್ಲಿ ಮನೆ ಮನೆಗೆ ಹೋಗಿ ಮಾರುತ್ತಿತ್ತು. ಇವರ ಕೆಲಸ ಮನೆ ಮನೆಗೆ ಹೋಗಿ ಪಾತ್ರೆಗಳನ್ನು ಮಾರುವುದು. ತಿನ್ನಲು ಊಟ, ಮಲಗಲು ಜಾಗ ಮತ್ತು ಭಾನುವಾರ ಪಿಚ್ಚರ್ ನೋಡಬಹುದಾದಷ್ಟು ಹಣ ಮಾತ್ರ ಸಿಗುತ್ತಿತ್ತು. ಹೀಗೆ ನಾಲ್ಕು ವರ್ಶ ಮತ್ತು ಆರು ತಿಂಗಳು ಕಳೆದರು. ಒಂದಿನ ಬೇಸತ್ತು, ಕೆಲಸ ಬಿಡುವುದಾಗಿ ಆ ಕಂಪನಿಯ ಮಾಲಿಕರಿಗೆ ಹೇಳಿ ಊರಿಗೆ ಹೋಗಲು ಹಣ ಕೇಳಿದರೆ ಮನುಷ್ಯ ಊರಿಗೆ ಹೋಗಲು ಬೇಕಾಗುವಷ್ಟು ಹಣವನ್ನೂ ನೀಡಲಿಲ್ಲ. ಸ್ನೇಹಿತರ ಬಳಿ ಸ್ವಲ್ಪ ಹಣ ಪಡೆದು ಹಾಸನದ ಬಳಿಯ ಅವರ ಹಳ್ಳಿಗೆ ಹೋದರು.

ಮೊದಲನೇ ಬಾರಿ ಬಂಡೆ ಜಾರುವುದು(rappelling) ಮಾಡಿದಾಗ ಬೆರುಳು ಸಿಕ್ಕಿಕೊಂಡು ಹೆದರಿದ್ದೆ.
ಹಳ್ಳಿಯಲ್ಲಿ ಹಬ್ಬವಿತ್ತು. ಅಮ್ಮ ಮಗ ಮನೆಗೆ ಬಂದಿದ್ದಾನೆಂದು ಸ್ವಲ್ಪ ಜೋರಾಗಿಯೇ ಹಬ್ಬ ಮಾಡಿದ್ದರು. ಇವರು ಧರ್ಮಸ್ಥಳಕ್ಕೆ ಹೋಗಿದ್ದೆ. ದಾರಿಯಲ್ಲೇ ಇದ್ದ ಕಾರಣ ಬಂದೆ ಅಂದರು. ಊಟವೆಲ್ಲ ಮುಗಿಯಿತು, ಅಪ್ಪ ಎಲೆ ಅಡಿಕೆ ಜಿಗಿಯುತ್ತಾ ಕೂತರು. ಮಗ ಮೆಲ್ಲನೆ ನನಗೆ ಒಂದಷ್ಟು ಹಣ ಬೇಕಿತ್ತು ಅಂದರು. ಅಪ್ಪನಿಗೆ ಕೋಪ, ಅಮ್ಮನಿಗೆ ಆತಂಕ. ಅಮ್ಮ ಇಷ್ಟು ವರ್ಷ ದುಡಿದಿದ್ದೀಯಾ, ನೀನೆ ಕಾಸು ಕೊಡ್ತೀಯಾ ಅಂದ್ರೆ ನಮ್ಮನ್ನೇ ಕೇಳ್ತಿದ್ದಿಯಲ್ಲಪ್ಪ ಅಂದ್ರು. ಮತ್ತೆ ಇವರು ನಡೆದ ಕಥೆಯನ್ನೆಲ್ಲ ವಿವರಿಸಿ ಮೂರು ಸಾವಿರ ಪಡೆದು ಬೆಂಗಳೂರಿಗೆ ಬಂದರು.

ಮತ್ತೆ ಮೊನ್ನೆ ಧೈರ್ಯದಿಂದ rappelling ಮಾಡಿದೆ!
ಈ ಬಾರಿ ಒಂದು ಕೆಲಸ ಗೊತ್ತಿತ್ತು. ಮನೆ ಮನೆಗೆ ಹೋಗಿ ಪಾತ್ರೆ ಮಾರಿ ಅನುಭವವಿತ್ತು. ಮೂರು ಸಾವಿರಕ್ಕೆ ಪಾತ್ರೆ ಖರೀದಿಸಿ, ಕೋಲಾರಕ್ಕೆ ಹೋದರು. ಮೂರರಿಂದ ಐದು ಸಾವಿರ ಮಾಡಿದರು. ಐದರಿಂದ ಎಂಟು ಸಾವಿರ ಮಾಡಿದರು. ಒಂದೇ ವರ್ಷದಲ್ಲಿ ಒಂದು ಸಣ್ಣ ಕಂಪನಿ ಕಟ್ಟಿದರು. ಮತ್ತೊಂದು ವರ್ಷದಲ್ಲಿ ಎಂಟು ಮಂದಿ ಕೆಲಸದವರನ್ನು ನೇಮಿಸಿಕೊಂಡರು. ಬೆಂಗಳೂರಿನ ವಿಜಯನಗರದಲ್ಲಿ ಒಂದು ಶೇಡ್ ಬಾಡಿಗೆ ಪಡೆದರು. ವಹಿವಾಟು ಚೆನ್ನಾಗಿ ನಡೆಯಿತು. ಎಂಟು ಜನರಲ್ಲಿ ಒಬ್ಬನೊಟ್ಟಿಗೆ ಜಗಳವಾಯಿತು, ಅವನು ನಿಧಾನವಾಗಿ ಉಳಿದವರ ತಲೆ ಕೆಡಿಸಿದ. ರಾತ್ರೋರಾತ್ರಿ ಎಂಟು ಜನ ಕೆಲಸ ಬಿಟ್ಟರು. ಶೇಡ್‌ಗೆ ಬಾಡಿಗೆ ಕಟ್ಟಬೇಕು, ಈಗಾಗಲೇ ಕೊಂಡ ಪಾತ್ರೆಗಳನ್ನು ಮಾರಬೇಕು. ಹಲವು ರಾತ್ರಿಗಳು ನಿದ್ದೆಯೇ ಬರಲಿಲ್ಲ. ನಿಧಾನವಾಗಿ ಇವರೇ ಎಲ್ಲ ಪಾತ್ರೆಗಳನ್ನು ಮಾರಿ. ಶೇಡ್‌ನ್ನು ಮುಚ್ಚಿದರು. 




ಮತ್ತೆ ಕಂಪನಿ ಶುರು ಮಾಡಲು ಭಯ. ಮತ್ತೇನು ಮಾಡುವುದು ಎಂಬ ಪ್ರಶ್ನೆ ಬಹಳ ದಿನ ಕಾಡಿತು. ಈ ಕಸುಬನ್ನು ಬಿಟ್ಟರೆ ಬೇರೆ ಯಾವುದೂ ಗೊತ್ತಿಲ್ಲ. ಮತ್ತೆ ಅದೇ ಕೆಲಸಕ್ಕೆ ಇಳಿದರು. ಒಂದೆರಡು ಮಾರಾಟಗಾರರನ್ನು ಸೇರಿಸಿಕೊಂಡರು. ಹೋದ ಬಾರಿ ಕಲಿತ ಪಾಠಗಳನ್ನು ಅಳವಡಿಸಿಕೊಂಡರು. ಹಳೆಯ ತಪ್ಪುಗಳನ್ನು ಮತ್ತೆ ಮಾಡಲಿಲ್ಲ. ಕರ್ನಾಟಕದಾದ್ಯಂತ ಅವರ ಕಂಪನಿಯ ಮಾರಾಟಗಾರರು ಪಾತ್ರೆಗಳನ್ನು ಮಾರಿದರು. ಜೀವನಕ್ಕೆ ಸಾಕಾಗುವಷ್ಟು ಎರಡೇ ವರ್ಷಗಳಲ್ಲಿ ದುಡಿದರು.  

ಮತ್ತೆ ಕಷ್ಟದ ದಿನಗಳು ಹತ್ತಿರವಾದವು. ಈ ಬಾರಿ ಎದೆ ಗುಂದಲಿಲ್ಲ. ಆನ್‌ಲೈನ್ ಉದ್ಯಮ ಬೆಳೆದಂತೆ ಅವರ ಉದ್ಯಮಕ್ಕೂ ಕುತ್ತು ಬಂತು. ಮುಂದೆ ಸಾಗಿಸುವುದು ಕಷ್ಟವೆನಿಸಿ ಸರಿಯಾದ ಸಮಯಕ್ಕೆ ಕಂಪನಿ ಮುಚ್ಚಿದರು. ಒಂದು ವರ್ಷ ಮನೆಯಲ್ಲೇ ನೆಮ್ಮದಿಯಿಂದ ಕಾಲ ಕಳೆದು ಮತ್ತೊಂದು ಹೊಸ ಪ್ರಯತ್ನವನ್ನು ಹಾಸನದಲ್ಲಿ ಮಾಡಲು ಸಿದ್ದತೆ ನಡೆಸುತ್ತಿದ್ದಾರೆ.  ಇವರಿಗಿನ್ನೂ ಮುವತ್ತಾಮೂರು ವರ್ಷ, ಇಂದು ಭಯವೆಂಬುದು ಅವರ ಕಣ್ಣಲ್ಲಿ ಸುಳಿಯುವುದೂ ಇಲ್ಲ.

ನಾನು ಮತ್ತು ಸ್ವರ್ಣ ಮಾತನಾಡುತ್ತಿದ್ದುದಕ್ಕೂ ನಮ್ಮ ಮನೆಯ ಒನರ್ ಜೀವನವನ್ನು ಒಂದೇ ಸೂರಿನಡಿಯಲ್ಲಿ ನೋಡಲು ಪ್ರಯತ್ನಿಸಿದೆ. ನಾವೆಲ್ಲರೂ ಒಂದಲ್ಲಾ ಒಂದು ರೀತಿ ಸೋಲಲೇ ಬೇಕು. ಸೋಲದೇ ಪಾಠ ಕಲಿಯುವುದು ಸುಳ್ಳು. ಬೇಗನೆ ಸೋತವರು ಜೀವನದಲ್ಲಿ ಬೇಗನೆ ಪಾಠ ಕಲಿಯುತ್ತಾರೆ. ನಿಧಾನವಾಗಿ ಸೋತವರು ನಿಧಾನವಾಗಿ ಪಾಠ ಕಲಿಯುತ್ತಾರೆ. ಸೋಲುತ್ತಿವೆಂಬ ಭಯ, ಆತಂಕ ಸೋಲುವ ತನಕವೂ ಇರುತ್ತದೆ. ಸೋಲು ನಿಶ್ಚಿತ ಮತ್ತು ಅದನ್ನು ಎದುರಿಸುವುದನ್ನು ಕಲಿತಾಗ ಮಾತ್ರ ಅದು ದೂರವಾಗುವುದು.

ಮೊನ್ನೆ ಪತ್ರಿಕೆಗಳಲ್ಲಿ ಪರೀಕ್ಷೆಗಳಲ್ಲಿ ಫೇಲ್ ಆಗಿ ಆತ್ಮಹತ್ಯೆಗೊಂಡ ವಿದ್ಯಾರ್ಥಿಗಳ ಬಗ್ಗೆ ಓದಿದೆ. ಮನಸಿಗೆ ಬೇಸರವೆನಿಸಿತು. ನಾವೆಂತ ಸಮಾಜವನ್ನು ಸೃಷ್ಟಿಸುತ್ತಿದ್ದೇವೆ. ಸೋಲನ್ನು ಒಪ್ಪಿಕೊಳ್ಳುವ ಮನಸನ್ನು ನಾವು ರೂಡಿಸಿಕೊಳ್ಳಬೇಕಿದೆ. ನಮ್ಮ ಶಿಕ್ಷಣ ವ್ಯವಸ್ಥೆ ಜೀವನ ಪಾಠವನ್ನು ಹೇಳುವಲ್ಲಿ ವಿಫಲವಾಗುತ್ತಿದೆ. ಸೋಲುವುದರಲ್ಲಿ ತಪ್ಪಿಲ್ಲ. ಬೇಗನೆ ಸೋತರೆ ಬೇಗನೆ ಪಾಠಗಳನ್ನು ಕಲಿಯಬಹುದು. ನಾವು ಸದೃಡರಾಗಬೇಕಾದರೆ ನಮ್ಮ ಬಾಲ್ಯ ಅಥವಾ ಯವ್ವನದಲ್ಲೇ ಸೋಲುವುದು ಒಳಿತು. 

ನಿಮ್ಮ ಸ್ನೇಹಿತರು ಅಥವಾ ನೆಂಟರು ಯಾವುದರಲ್ಲಾದರೂ ಸೋತಿದ್ದರೆ, ಅವರ ಜೊತೆ ನಿಲ್ಲಿ. ಅವರಿಗೆ ಧೈರ್ಯ ತುಂಬಿ. ಮುಖ್ಯವಾಗಿ ಪರೀಕ್ಷೆಗಳಲ್ಲಿ ನಪಾಸಾದ ಮಕ್ಕಳನ್ನು ಹುರಿದುಂಬಿಸಿ ಹಿಯಾಳಿಸಬೇಡಿ.

ಇದರ ಇಂಗ್ಲೀಷ್ ಅವತರಣಿಕೆ ಇಲ್ಲಿದೆ.



Sunday, December 20, 2015

ಹೆಸರು ಮತ್ತು ವ್ಯಕ್ತಿತ್ವ

ಮೊನ್ನೆ ಭಾನುವಾರ ನಾನು ಎಂಜಿನಿಯರಿಂಗ್ ಓದುವಾಗ ಇದ್ದ ವಿದ್ಯಾರ್ಥಿ ನಿಲಯಕ್ಕೆ ಹೋಗಿದ್ದೆ. ಆ ದಿನ ನಿಲಯದ  ವಾರ್ಷಿಕೋತ್ಸವವನ್ನು ಏರ್ಪಡಿಸಲಾಗಿತ್ತು. ಈ ಬಾರಿ ನಿಲಯದ ಧರ್ಮದರ್ಶಿಗಳು ಮತ್ತು ಮುಖ್ಯ ಅತಿಥಿಗಳೊಟ್ಟಿಗೆ ವೇದಿಕೆಯ ಮೇಲೆ ಆಸಿನನಾಗಿದ್ದೆ.  ನಮ್ಮ ನಿಲಯದ ಹಿರಿಯ ವಿದ್ಯಾರ್ಥಿ ಬಳಗವನ್ನು ಪ್ರತಿನಿಧಿಸುವ ಜವಬ್ದಾರಿ ನನ್ನ ಮೇಲಿತ್ತು. ಈ ನಿಲಯವನ್ನು ಬಿಟ್ಟು ಎಂಟು ವರ್ಷಗಳಾಗಿವೆ. ಅಲೋಚನೆಗಳ ಮಹಾಪೂರವೇ ತಲೆಯನ್ನು ತುಂಬಿಹೋಗಿವೆ. ಎಂಟು ವರ್ಷಗಳ ಹಿಂದೆ ನಾನು ಇದೇ ವಾರ್ಷಿಕೋತ್ಸವವನ್ನು ವಿದ್ಯಾರ್ಥಿಯಾಗಿ ಮುನ್ನಡೆಸುತ್ತಿದ್ದೆ.

ಆಗ ನಡೆದ ಜಗಳಗಳು, ಸಂಭ್ರಮಗಳು, ಅಪಘಾತ, ದೇಣಿಗೆ ಸಂಗ್ರಹ ಹಾಗು ಮತ್ತಿತರ ವಿಷಯಗಳು ನನ್ನ ನೆನಪಿಗೆ ಬರತೋಡಗಿದವು. ಇಂತಹ ಆಚರಣೆಗಳು ನನ್ನಲ್ಲಿ ನಾಯಕತ್ವ ಗುಣ, ಸಂವಹನ ಕಲೆ, ಜನಬಳಕೆಯಂತಹ ಅತ್ಯುತ್ತಮ ಕೌಶಲ್ಯಗಳನ್ನು ಬೆಳೆಸಿದವು. ಈ ಆಚರಣೆಗಳು ನನ್ನನ್ನು ಮಧ್ಯ ರಾತ್ರಿಯವರೆಗೆ ದುಡಿಸಿದವು. ಒಂದಷ್ಟು ಸಮಾನ ಮನಸ್ಕ ಸ್ನೇಹಿತರನ್ನು ನನಗೆ ಕೊಟ್ಟವು.  ಹಾಸ್ಟೇಲ್ ಮತ್ತು ಕಾಲೇಜುಗಳಲ್ಲಿ ಒಂದಷ್ಟು ಕೀರ್ತಿಯನ್ನೂ ತಂದು ಕೊಟ್ಟವು. ಇವುಗಳಿಂದಲೇ ಸಾಕಷ್ಟು ಜೀವನ ಪಾಠಗಳನ್ನು ಕಲಿತೆ.

ಕೆಲವು ಘಟನೆಗಳು ನೆನಪಿನಲ್ಲಿ ಆಚ್ಚಳಿಯದಂತೆ ಉಳಿಯುತ್ತವೆ. ಪದೇ ಪದೇ ಕಾಡುತ್ತವೆ. ನಾನು ವೇದಿಕೆ ಮೇಲಿರುವಾಗ ಒಂದು ಘಟನೆ ನೆನಪಾಯಿತು. ಅದನ್ನು ನಿಮ್ಮೊಟ್ಟಿಗೆ ಹಂಚಿಕೊಳ್ಳುತ್ತಿದ್ದೇನೆ.

ಅಂದು ಕಾರ್ಯಕ್ರಮ ಹತ್ತು ಮೂವತ್ತಕ್ಕೆ ಶುರುವಾಗಬೇಕಿತ್ತು. ಉದ್ಘಾಟನಾ ಕಾರ್ಯಕ್ರಮಕ್ಕೆ ಇಬ್ಬರು ಮುಖ್ಯ ಅತಿಥಿಗಳನ್ನು ಆಹ್ವಾನಿಸಲಾಗಿತ್ತು. ಸರಿ ಸುಮಾರು ಹತ್ತು ಮೂವತ್ತಾಗಿತ್ತು. ಒಬ್ಬರು ಮುಖ್ಯ ಅತಿಥಿಗಳು ಇನ್ನೂ ಬಂದಿರಲಿಲ್ಲ. ಎಲ್ಲಾ ರ್ಮದರ್ಶಿಗಳು ಮತ್ತು ಒಬ್ಬರು ಮುಖ್ಯ ಅತಿಥಿಗಳು ಅಧ್ಯಕ್ಷರ ಕೊಠಡಿಯಲ್ಲಿದ್ದರು. ನಾನು ಅಧ್ಯಕ್ಷರ ಕೊಠಡಿಯಲ್ಲಿದ್ದು ಸಭಾಂಗಣದಲ್ಲಿದ್ದ ಸ್ನೇಹಿತರ ಜೊತೆ ಇಲ್ಲಿನ ಸ್ಥಿತಿಗತಿಗಳ ಬಗ್ಗೆ ವಿವರಿಸುತ್ತಿದ್ದೆ. ಇದರ ಮಧ್ಯದಲ್ಲೇ ನನ್ನ ಸ್ವಾಗತ ಭಾಷಣದ ತಯಾರಿಯನ್ನೂ ನಡೆಸುತ್ತಿದ್ದೆ. ಆಗ ನಮ್ಮ ಸಂಸ್ಥೆಯ ಅಧ್ಯಕ್ಷರು ಎಲ್ಲಪ್ಪ ಇನ್ನೊಬ್ಬರು ಅತಿಥಿಗಳು ಇನ್ನೂ ಬಂದಿಲ್ಲ ಅವರಿಗೊಂದು ಫೋನ್ ಮಾಡಿ ಎಲ್ಲಿದ್ದಾರೆ ವಿಚಾರಿಸು ಎಂದರು. ಅವರ ಮಾತಿನಂತೆ ಅವರ ಮುಂದಿದ್ದ ಹಳೇ ಕಾಲದ ಫೋನು ಕೈಗೆತ್ತಿಕೊಂಡು ಅತಿಥಿಗಳ ನಂಬರನ್ನು ಒತ್ತಿದೆ. ಸರ್ ನಮಸ್ಕಾರ, ತೋಟದಪ್ಪ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿ ಮಾತನಾಡುತ್ತಿರುವುದು, ಎಲ್ಲಿದ್ದೀರ ಎಂದೆ? ಅವರು , ಇಲ್ಲೇ ಹತ್ತಿರದಲ್ಲೇ ಇದ್ದೇನೆ, ಇನ್ನೇನು ಬಂದೆ ಎಂದರು. ಫೋನ್ ಕೆಳಗಿಟ್ಟು, ವರದಿಯನ್ನು ಅಧ್ಯಕ್ಷರಿಗೆ ಒಪ್ಪಿಸಿದೆ. ಇನ್ನೊಬ್ಬರು ಮುಖ್ಯ ಅತಿಥಿಗಳು ಸರಿಯಾದ ಸಮಯಕ್ಕೆ ಬಂದರು. ನಾನು ಸಭಾಂಗಣದಲ್ಲಿದ್ದ ವಿದ್ಯಾರ್ಥಿಗಳಿಗೆ ಮೇಸೆಜ್ ಕಳಿಸಿ, ಸ್ವಾಗತ ಸಮಿತಿಯವರು ದಯವಿಟ್ಟು ಬನ್ನಿ ಎಂದೆ.

ಸಭಾಂಗಣ ಕೆಲವೇ ಕೆಲವು ಅಡಿಗಳ ದೂರದಲ್ಲಿತ್ತು. ನಾನು ಅತಿಥಿಗಳನ್ನು ಮತ್ತು ಧರ್ಮದರ್ಶಿಗಳನ್ನು ನಮ್ಮ ಸ್ವಾಗತ ಸಮಿತಿಯೊಟ್ಟಿಗೆ ಪೂರ್ಣ ಕುಂಭದೊಟ್ಟಿಗೆ ಬರಬೇಕೆಂದು ಕೋರಿದೆ.  ಮುಂದೆ ಅತಿಥಿಗಳು, ನಂತರ ಧರ್ಮದರ್ಶಿಗಳು ಕೊನೆಯಲ್ಲಿ ಅಧ್ಯಕ್ಷರು ಸಭಾಂಗಣದ ಕಡೆಗೆ ಸಾಗಿದೆವು. ನಾನು ಅಧ್ಯಕ್ಷರೊಟ್ಟಿಗಿದ್ದೆ. ಅತಿಥಿಗಳು ಮತ್ತು ಧರ್ಮದರ್ಶಿಗಳು ಮುಂದೆ ಸಾಗಿದೊಡನೆ ಅಧ್ಯಕ್ಷರು ನನ್ನ ಬಲ ಕೈಹಿಡಿದು ಅವರ ಬಳಿ ಎಳೆದು ಒಂದು ಪ್ರಶ್ನೆ ಕೇಳಿದರು. ನಿನಗೆ ಹೆಸರಿದೇಯೆ? ನಾನು ಕಕ್ಕಾಬಿಕ್ಕಿಯಾದೆ. ಅವರೊಟ್ಟಿಗೆ ಸಾಕಷ್ಟು ಬಾರಿ ಮಾತನಾಡಿದ್ದೆ. ಹೌದು ಸರ್ ಹೆಸರಿದೆ ಎಂದೆ. ಇನ್ನೂ ಎಷ್ಟು ದಿನ ನೀನು ಇಂತವರ ಮಗ, ಇಂತಹ ಊರಿನವನು, ಇಂತಹ ಕಾಲೇಜಿನವನು ಎಂದು ಹೇಳಿಕೊಂಡಿರ್ತೀಯ? ನಿನ್ನ ಹೆಸರಿನಿಂದ ಯಾವಾಗಿನಿಂದ ಗುರ್ತಿಸಿಕೊಳ್ಳುತ್ತೀಯ, ನಿನ್ನದೇ ವ್ಯಕ್ತಿತ್ವವನ್ನು ಸೃಷ್ಟಿಸಿಕೊಳ್ಳುವುದಾದರು ಯಾವಾಗ ಎಂದು ಹೇಳಿ ಧರ್ಮದರ್ಶಿಗಳ ಗುಂಪನ್ನು ಸೇರಿಕೊಂಡರು. ಸುಮ್ಮನೆ ತಲೆ ಬಗ್ಗಿಸಿದೆ. ತಲೆ ಗಿರ್ರನೆ ಸುತ್ತುತ್ತಿತ್ತು.

ಸಾಕಷ್ಟು ಬಾರಿ ನಮ್ಮ ಸಂಸ್ಥೆಯ ಅಧ್ಯಕ್ಷರ ಬಳಿ ಮಾತಾಡಿದ್ದೇನೆ. ನನ್ನ ಹಲವಾರು ತಪ್ಪುಗಳನ್ನು ತಿದ್ದಿದ್ದಾರೆ. ಹಲವಾರು ಬಾರಿ ಬೆನ್ನು ತಟ್ಟಿದ್ದಾರೆ. ಈ ಘಟನೆ ನನ್ನನ್ನು ಬಹಳ ಕಾಡಿತು. ನಮ್ಮ ಹೆಸರನ್ನು ಹೆಮ್ಮೆಯಿಂದ ಹೇಳುವುದು ಎಷ್ಟು ಮುಖ್ಯ. ನಮ್ಮ ವ್ಯಕ್ತಿತ್ವವನ್ನು ಅದು ಸೂಚಿಸುತ್ತದೆ. ಅಂದಿನಿಂದ ನನ್ನ ಹೆಸರನ್ನು ಹೇಳುವ ಸಂದರ್ಭ ಬಂದಾಗಲೆಲ್ಲ ಬಹಳ ಹೆಮ್ಮೆಯಿಂದ ನನ್ನ ಹೆಸರನ್ನು ಹೇಳುತ್ತೇನೆ. ಹೊಸಬರನ್ನು  ಭೇಟಿ ಮಾಡಿದಾಗ ಸಾಕಷ್ಟು ಖುಷಿಯಿಂದ ನನ್ನ ಹೆಸರು ಹೇಳಿ ಪರಿಚಯ ಬೆಳಿಸಿಕೊಳ್ಳುತ್ತೇನೆ.

ಸಾಕಷ್ಟು ಜನರನ್ನು ಗಮನಿಸಿದ್ದೇನೆ. ಅವರು ತಮ್ಮನ್ನು ಪರಿಚಯಿಸಿಕೊಳ್ಳುವ ಅಭ್ಯಾಸವನ್ನೇ ಮೈಗೂಡಿಸಿಕೊಂಡಿರುವುದಿಲ್ಲ. ಸಾಕಷ್ಟು ಬಾರಿ ನಮ್ಮನ್ನು ನಾವೇ  ಸರಿಯಾಗಿ ಗುರುತಿಸಿಕೊಳ್ಳುವುದಿಲ್ಲ. ನಮ್ಮ ಹೆಸರು ಕಿವಿಯ ಮೇಲೆ ಬಿದ್ದರೆ ಕಿವಿಗಳು ನಿಮಿರುತ್ತವೆ ಅಲ್ಲವೇ? ನಮ್ಮ ಹೆಸರನ್ನು ಕರೆದಾಗ ಸಾಕಷ್ಟು ಬಾರಿ ಖುಷಿಯೇ ಆಗುತ್ತದೆ(ಕೋರ್ಟು ಅಥವಾ ಜೈಲುಗಳನ್ನು ಬಿಟ್ಟು ). ಮುಂದಿನ ಬಾರಿ ನಿಮ್ಮ ಹೆಸರನ್ನು ಹೆಮ್ಮೆಯಿಂದ ಹೇಳಿ, ನಿಮ್ಮ ಹೆಸರನ್ನು ಹೇಳುವಾಗ ನಾಚಿಕೆ ಪಡುವ ಯಾವ ಅಗತ್ಯವೂ ಇಲ್ಲ, ಅದು ನಿಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತದೆ. ನಿಮಗೆ ನಿಮ್ಮ ಹೆಸರಿನ ಬಗ್ಗೆ ಹೆಮ್ಮೆಯಿರಲಿ. ನಮ್ಮ ಹೆಸರಿನ ಬಗ್ಗೆ ನಮಗೇ ಹೆಮ್ಮೆಯಿರದಿದ್ದರೆ ಮತ್ಯಾರಿಗಿರುತ್ತದೆ.